ಜನಾಂಗ ಹತ್ಯೆ -
ಒಂದು ರಾಷ್ಟ್ರ, ಕುಲ, ಬುಡಕಟ್ಟು, ಮತ ಅಥವಾ ರಾಜಕೀಯ ಸಮೂಹವನ್ನು ನಾಶಗೊಳಿಸುವ ಯತ್ನ (ಜೆನೊಸೈಡ್). ಇಂಗ್ಲಿಷಿನ ಜೆನೊಸೈಡ್ ಎಂಬ ಶಬ್ದವನ್ನು ರಚಿಸಿದವನು ರಾಫೇಲ್ ಲಿಮ್‍ಕಿನ್ ಎಂಬ ಅಮೆರಿಕನ್ ವಿದ್ವಾಂಸ. ಬುಡಕಟ್ಟು, ರಾಷ್ಟ್ರ ಅಥವಾ ಕುಲ ಎಂಬ ಅರ್ಥ ಇರುವ ಜೆನೋಸ್ ಎಂಬ ಗ್ರೀಕ್ ಪದವನ್ನೂ ಹತ್ಯೆ ಅಥವಾ ವಧೆ ಎಂಬ ಅರ್ಥದ ಸೈಡ್ ಎಂಬ ಲ್ಯಾಟಿನ್ ಪ್ರತ್ಯಯವನ್ನೂ ಕೂಡಿಸಿ ಅವನು ಈ ಶಬ್ದವನ್ನು ರಚಿಸಿದ. ಜನಾಂಗಹತ್ಯೆಯನ್ನು ನಿಷೇಧಿಸಲು ಅಂತರರಾಷ್ಟ್ರೀಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಾದಿಸಿದವನು ಆತ. 1933-45ರ ಕಾಲದ ಯೂರೋಪಿನ ಅನುಭವದ ದೃಷ್ಟಿಯಲ್ಲಿ, ಮಾನವ ಸಮೂಹಗಳನ್ನೇ ನಾಶಗೊಳಿಸುವ ಕೃತ್ಯಕ್ಕೆ ಸಂಬಂಧಿಸಿದಂತೆ ನ್ಯಾಯಿಕ ಪರಿಕಲ್ಪನೆಯನ್ನು ರೂಪಿಸುವುದು ಅವಶ್ಯವೆಂದು ಆತ ಪ್ರತಿಪಾದಿಸಿದ.

	ಎರಡನೆಯ ಮಹಾಯುದ್ಧದ ಸಮಯದಲ್ಲಿ ಎಸಗಲಾದ ಅಪರಾಧಗಳನ್ನು ಕುರಿತು ನಡೆಸಿದ ನ್ಯೂರೆನ್‍ಬರ್ಗ್ ಮತ್ತು ಇತರ ವಿಚಾರಣೆಗಳಿಂದ ಬೆಳಕಿಗೆ ಬಂದ ಸಂಗತಿಗಳ ಪರಿಣಾಮವಾಗಿ ಜನಾಂಗಕ್ಕೆ ಅಂತರರಾಷ್ಟ್ರೀಯ ನ್ಯಾಯದ ದೃಷ್ಟಿಯಲ್ಲಿ ನಾಗರಿಕ ಪ್ರಪಂಚದ ಖಂಡನೆಗೆ ಅರ್ಹವಾದ ಅಪರಾಧವೆಂದೂ ಇದನ್ನು ಎಸಗುವವರೂ ಅವರ ಜೊತೆಗಾರರೂ ಶಿಕ್ಷಾರ್ಹರೆಂದೂ ವಿಶ್ವಸಂಸ್ಥೆ ಸಾರಿತು. ಜನಾಂಗಹತ್ಯೆಯ ಅಪರಾಧದ ತಡೆ ಹಾಗೂ ಶಿಕ್ಷೆಯ ಬಗ್ಗೆ 1948ರ ಡಿಸೆಂಬರ್ 9ರಂದು ವಿಶ್ವಸಂಸ್ಥೆಯ ಮಹಾಸಭೆ ಒಂದು ಒಂಡಂಬಡಿಕೆಗೆ ಒಪ್ಪಿಗೆ ನೀಡಿತು. ಜನಾಂಗಹತ್ಯೆ ಯುದ್ಧಕಾಲದಲ್ಲೇ ನಡೆಯಲಿ, ಶಾಂತಿಕಾಲದಲ್ಲೇ ನಡೆಯಲಿ, ಅದು ಅಂತರರಾಷ್ಟ್ರೀಯ ನ್ಯಾಯದೃಷ್ಟಿಯಲ್ಲಿ ಅಪರಾಧ; ಅದಕ್ಕಾಗಿ ದಂಡನೆ ವಿಧಿಸಲು ಬಡಂಬಡಿಕೆಯ ರಾಷ್ಟ್ರಗಳು ವಾಗ್ದಾನ ಮಾಡಿವೆ.

	ಜನಾಂಗಹತ್ಯೆಗೂ ಜನಹತ್ಯೆಗೂ ವ್ಯತ್ಯಾಸವುಂಟು. ಶಾಂತಿಗೆ ವಿರುದ್ಧವಾದ ಅಪರಾಧಗಳಿಗೆ ಅಥವಾ ಯುದ್ಧಾಪರಾಧಗಳಿಗೆ ಸಂಬಂಧಿಸಿದಂತೆ ಎಸಗಿದಾಗ ಮಾತ್ರ ಕೆಲವು ಅಮಾನುಷ ಕೃತ್ಯಗಳು ಅಂತರರಾಷ್ಟ್ರೀಯ ಅಪರಾಧಗಳಾಗುತ್ತವೆ. ಎಂದರೆ ಮಾನವತೆಯ ವಿರುದ್ಧವಾದ ಅಪರಾಧಗಳಾಗುತ್ತವೆ. ಆದರೆ ಒಂದು ಕೃತ್ಯವನ್ನು ಜನಾಂಗಹತ್ಯೆಯೆಂದು ಕರೆಯಬೇಕಾದರೆ ಅದು ಯುದ್ಧಸಂಬಂಧವಾದ್ದಾಗಿಯೇ ಇರಬೇಕಾದ್ದಿಲ್ಲ; ಯುದ್ಧಸಮಯದಲ್ಲೇ ಎಸಗಿದ್ದಾಗಿರಬೇಕಿಲ್ಲ. ಒಂದು ರಾಷ್ಟ್ರ, ಕುಲ ಬುಡಕಟ್ಟು, ಮತ ಅಥವಾ ರಾಜಕೀಯ ಸಮೂಹವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಅಳಿಸಿಹಾಕುವ ಉದ್ದೇಶದಿಂದ ಎಸಗಿದ ಈ ಕೃತ್ಯಗಳೆಲ್ಲವೂ ಒಡಂಬಡಿಕೆಯ ಪ್ರಕಾರ ಜನಾಂಗಹತ್ಯೆ ಎನಿಸುತ್ತದೆ: 1 ಒಂದು ಸಮೂಹದ ಸದಸ್ಯರ ಕೊಲೆ; 2 ಒಂದು ಸಮೂಹದ ಸದಸ್ಯರಿಗೆ ಶಾರೀರಿಕವಾದ ಅಥವಾ ಬೌದ್ಧಿಕವಾದ ತೀವ್ರ ಹಾನಿ ಉಂಟುಮಾಡುವುದು; 3 ಒಂದು ಸಮೂಹವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಗೊಳಿಸುವ ದೃಷ್ಟಿಯಿಂದ ಅದನ್ನು ದುರ್ಭರ ಜೀವನಸ್ಥಿತಿಗಳಿಗೆ ಒಳಪಡಿಸುವುದು; 4 ಒಂದು ಸಮೂಹದಲ್ಲಿ ಮಕ್ಕಳು ಹುಟ್ಟದಂತೆ ಕಟ್ಟುಕಟ್ಟಳೆಗಳನ್ನು ಜಾರಿಗೆ ತುರುವುದು; 5 ಒಂದು ಸಮೂಹದ ಮಕ್ಕಳನ್ನು ಬಲಾತ್ಕಾರವಾಗಿ ಇನ್ನೊಂದು ಸಮೂಹಕ್ಕೆ ವರ್ಗಾಯಿಸುವುದು.

	1951ರ ಜನವರಿ 12ರಿಂದ ಈ ಒಂಡಂಬಡಿಕೆ ಕಾರ್ಯರೂಪಕ್ಕೆ ಬಂದಿದೆ. ಈ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದ ಬಳಿಕ 1965ರ ಫೆಬ್ರುವರಿ 28ರವರೆಗೆ 67 ರಾಷ್ಟ್ರಗಳು ಇದನ್ನು ಒಪ್ಪಿ ಸಹಿ ಮಾಡಿದ್ದುವು. ನೇರವಾಗಿ ಮತ್ತು ಸಾರ್ವಜನಿಕ ದೋಷಾರೋಪಣೆಯ ಮೂಲಕ ಸಂಚು ಹೂಡುವುದು ಹಾಗೂ ಜನಾಂಗಹತ್ಯೆ ನಡೆಸಲು ಪ್ರಯತ್ನಿಸುವುದು ಮತ್ತು ಅದರಲ್ಲಿ ಭಾಗಿಯಾಗುವುದು-ಈ ಎಲ್ಲ ಅಪರಾಧಗಳೂ ಶಿಕ್ಷಾರ್ಹವೆಂದು ಪರಿಗಣಿತವಾಗಿವೆ. ಅಪರಾಧಿಗಳು ಸಂವಿಧಾನಬದ್ಧ ಆಡಳಿತಗಾರರಾಗಿರಲಿ, ಸರ್ಕಾರಿ ಅಧಿಕಾರಿಗಳಾಗಿರಲಿ, ಖಾಸಗಿ ವ್ಯಕ್ತಿಗಳಾಗಿರಲಿ ಅವರೆಲ್ಲ ಶಿಕ್ಷೆಗೆ ಒಳಗಾಗುತ್ತಾರೆ. ಕೃತ್ಯ ನಡೆದ ಪ್ರದೇಶದ ಸರ್ಕಾರದಿಂದ ರಚಿತವಾದ ಅರ್ಹ ವಿಚಾರಣಾಮಂಡಳಿಯಾಗಲಿ, ಒಡಂಬಡಿಕೆಯನ್ನೊಪ್ಪಿದ ರಾಷ್ಟ್ರಗಳ ಮೇಲೆ ಅಧಿಕಾರವ್ಯಾಪ್ತಿಯುಳ್ಳ, ಒಡಂಬಡಿಕೆ ರಾಷ್ಟ್ರಗಳು ಒಪ್ಪಿಕೊಂಡ, ಅಂತರರಾಷ್ಟ್ರೀಯ ದಂಡನಾಮಂಡಳಿಯಾಗಲಿ ಆರೋಪಿಗಳ ವಿಚಾರಣೆ ಮಾಡತಕ್ಕದ್ದು.

	ಒಂದು ರಾಷ್ಟ್ರದ ಸರ್ಕಾರವೇ ತನ್ನ ಸ್ವಂತ ಪ್ರದೇಶದೊಳಗೆ ಜನಹತ್ಯೆಯನ್ನೆಸಗಿದರೂ ಅದು ಆ ರಾಷ್ಟ್ರಕ್ಕೆ ಮಾತ್ರ ಸಂಬಂಧಪಟ್ಟ ವಿಷಯವಾಗದೆ ಅಂತರ ರಾಷ್ಟ್ರೀಯ ವಿಷಯವಾಗುತ್ತದೆ ಎಂಬ ಅಂಶವನ್ನು ಒಡಂಬಡಿಕೆಯ ರಾಷ್ಟ್ರಗಳು ಮನಗಂಡಿವೆ. ಒಡಂಬಡಿಕೆಯ ಯಾವುದೇ ರಾಷ್ಟ್ರವಾದರೂ ಜನಾಂಗಹತ್ಯೆಯನ್ನು ತಡೆಗಟ್ಟಲು ಕ್ರಮಕೈಗೊಳ್ಳಬಹುದು; ವಿಶ್ವಸಂಸ್ಥೆಯ ಪ್ರಣಾಳಿಕೆಗಳಿಗನುಗುಣವಾಗಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮಧ್ಯ ಪ್ರವೇಶಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋರಬಹುದು.

	ಜನಾಂಗಹತ್ಯೆಯ ಪರಿಕಲ್ಪನೆ ಈಚಿನದಾದರೂ ಅದು ಇತಿಹಾಸದ ಉದ್ದಕ್ಕೂ ನಡೆದುಕೊಂಡು ಬಂದಿರುವ ಅಪರಾಧ. 1269ರಲ್ಲಿ ಭಾರತದ ನಶಾಪುರದ ಪ್ರದೇಶದಲ್ಲಿ ಜೆಂಗಿಸ್‍ಖಾನನ ಕಡೆಯವರು ನಡೆಸಿದ ಜನಾಂಗಹತ್ಯೆಯಿಂದ ಸುಮಾರು 17,47,000 ಜನ ಸತ್ತರೆಂದು ಹೇಳಲಾಗಿದೆ. ಉತ್ತರ ಐರ್ಲೆಂಡಿನಲ್ಲಿ 1641ರ ಅಕ್ಟೋಬರ್ 23ರಂದು 1,54,000 ಪ್ರಾಟೆಸ್ಟಂಟರನ್ನು ಕ್ಯಾತೊಲಿಕರು ಕೊಲೆ ಮಾಡಿದರು. ಜರ್ಮನ್ ಆಕ್ರಮಿತ ಪ್ರದೇಶದಲ್ಲಿ 1945ರ ಮೇವರೆಗೆ ನಾಟ್ಸಿಗಳು ಸುಮಾರು 57,00,000 ಯೆಹೂದ್ಯರನ್ನು ಕೊಂದರು. 1951 ರಿಂದ 1952ರವರೆಗೆ ಚೀನದಲ್ಲಿ ನಡೆದ ವಿಚಾರ ಸುಧಾರಣಾ ಚಳವಳಿಯ ಕಾಲದಲ್ಲಿ ಸಂಭವಿಸಿದ ಕ್ರಾಂತಿ ವಿರೋಧಿಗಳ ಹತ್ಯೆ 20,00,000 ಎಂದು ಅಂದಾಜು ಮಾಡಲಾಗಿದೆ. ಭಾರತ-ಪಾಕಿಸ್ತಾನ ವಿಭಜನೆಯ ಕಾಲದಲ್ಲಿ ಕಾಶ್ಮೀರದಲ್ಲಿ ಹತ್ಯೆಗೆ ಒಳಗಾದವರು 1,80,000 (1947).

	ಮಂಗೋಲರೂ ಹೂಣರು ಯೂರೋಪನ್ನು ಮುತ್ತಿದಾಗ, ಅಲೆಗ್ಸಾಂಡರ್ ದಂಡಯಾತ್ರೆ ನಡೆಸಿದಾಗ, ಇಸ್ಲಾಮ್ ಮತ ಹರಡಿದಾಗ, ಯೂರೋಪಿಯನರು ಆಫ್ರಿಕ-ಅಮೇರಿಕಗಳಲ್ಲಿ ನೆಲೆಸಿದಾಗ ಆದ ಜನಾಂಗ ಹತ್ಯೆಗಳಲ್ಲಿ ಅಸಂಖ್ಯಾತ ಜನ ಬಲಿಯಾಗಿದ್ದಾರೆ. ಇತಿಹಾಸದ ಆದಿಯಿಂದ ಸತತವಾಗಿ ಹತ್ಯೆಗೆ ಒಳಗಾಗಿರುವವರೆಂದರೆ ಯೆಹೂದ್ಯರು. 1971ರಲ್ಲಿ ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ನಡೆಸಿದ ಜನಾಂಗಹತ್ಯೆಯಲ್ಲಿ ಸತ್ತವರ ಸಂಖ್ಯೆ ಸುಮಾರು 30 ಲಕ್ಷ ಎಂದು ಅಂದಾಜು ಮಾಡಲಾಗಿದೆ. 										(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ